ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮಂಗಳೂರು: ರಾಜ್ಯ ಬಿಜೆಪಿಯ ಬಣ್ಣ ಬಯಲು: ಕೃಷ್ಣ ಬೈರೇಗೌಡ

ಮಂಗಳೂರು: ರಾಜ್ಯ ಬಿಜೆಪಿಯ ಬಣ್ಣ ಬಯಲು: ಕೃಷ್ಣ ಬೈರೇಗೌಡ

Sun, 08 Nov 2009 03:01:00  Office Staff   S.O. News Service
ಮಂಗಳೂರು, ನ.೭: ಬದಲಾವಣೆಯನ್ನು ಬಯಸಿದ ರಾಜ್ಯದ ಮತದಾರರು ಬಿಜೆಪಿ ಪಕ್ಷೀಯರಿಗೆ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಲು ಅವಕಾಶ ಮಾಡಿಕೊಟ್ಟರೂ ಕೂಡ ಬಿಜೆಪಿಗರು ಆ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳದೆ ಅಧಿಕಾರಕ್ಕಾಗಿ ಕಿತ್ತಾಡಿಕೊಳ್ಳುವ ಮೂಲಕ ತಮ್ಮ ಬಣ್ಣವನ್ನು ಬಯಲು ಮಾಡಿದ್ದಾರೆ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ, ಶಾಸಕ ಕೃಷ್ಣ ಬೈರೇಗೌಡ ಹೇಳಿದರು.

ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ರಾಜಕೀಯ ಅಜೀರ್ಣ ವಾಗುತ್ತಿದೆ. ಅಧಿಕಾರದ ಆಸೆ ಎಲ್ಲ ಪಕ್ಷೀಯರಿಗೂ ಇದೆ. ಆದರೆ, ಉತ್ತರ ಕರ್ನಾಟಕ ಭಾಗದ ಜನರು ನೆರೆ ಹಾವಳಿಯಿಂದ ತತ್ತರಿಸುತ್ತಿರುವಾಗ ಇವರು ಇಂಥ ರೆಸಾರ್ಟ್ ರಾಜಕೀಯ ಮಾಡುವುದು ಸರಿಯಲ್ಲ. ೮೦ ಹಳ್ಳಿಗಳ ಜನರು ಇನ್ನೂ ಚೇತರಿಸಿಕೊಂಡಿಲ್ಲ. ರಾಜ್ಯದ ಒಬ್ಬನೇ ಒಬ್ಬ ಸಚಿವ ಇನ್ನೂ ಅಲ್ಲಿಗೆ ಹೋಗಿಲ್ಲ ಎಂದ ಕೃಷ್ಣ ಬೈರೇಗೌಡ, ಬಿಜೆಪಿಗರು ತಮ್ಮ ಕಚ್ಚಾಟ ನಿಲ್ಲಿಸಿ ಜನರ ಕಣ್ಣೀರೊರೆಸಲು ಮುಂದಾಗದಿದ್ದರೆ ಸೋಮವಾರ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದರು

Share: